Monday, January 7, 2008

ಅವಮಾನಕ್ಕೆ ಅಂಜಬೇಡಿ...

’ಕಲಿಯೋದರಲ್ಲಿ ಈತ ತುಂಬ ನಿಧಾನ’ ಅಂತ ಆ ಪುಟ್ಟ ಹುಡುಗನ ಟೀಚರ್‍ ಒಬ್ಬಳು ಆ ಹುಡುಗನೆದುರೇ ಪಾಲಕರಿಗೆ ಹೇಳಿಬಿಡುತ್ತಾಳೆ. ಆ ಬಾಲಕನಿಗೆ ತುಂಬ ಅವಮಾನವಾಗಿಬಿಡುತ್ತದೆ. ಆತ ಆದ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ’ಅವಮಾನ’ ಅನ್ನೋದು ಬಹುಶಃ ಹಾಗೆ ಸುಮ್ಮನೆ ಕೂರಿಸುವುದೂ ಇಲ್ಲ. ಆ ಅವಮಾನವನ್ನಾತ ಛಲವನ್ನಾಗಿ ಸ್ವೀಕರಿಸುತ್ತಾನೆ. ಅವಮಾನದ ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಮುಂದೊಂದು ದಿನ ಸಾಧನೆಯ ಪ್ರತೀಕವೆಂಬಂತೆ ಈ ಜಗತ್ತಿನ ಬಹುದೊಡ್ಡ ವಿಜ್ಞಾನಿಯಾಗಿಬಿಡುತ್ತಾನೆ. ಆತ ಬೇರಾರೂ ಅಲ್ಲ, "ಥಾಮಸ್ ಅಲ್ವಾ ಎಡಿಸನ್"!.
ಅಷ್ಟೇ ಯಾಕೆ, ಮೋಹನದಾಸ ಕರಮಚಂದ ಅನ್ನೋ ಗುಬ್ಬಿ ಗಾತ್ರದ ದೇಹದವನಿಗೆ ಬಿಳಿಯರು ಮಾಡಿದ ಅವಮಾನವು ಆತನನ್ನು ಮಹಾನ್ ಹೋರಾಟಗಾರ "ಗಾಂಧಿ"ಯನ್ನಾಗಿಸುತ್ತದೆ. ಅಸ್ಪೃಶ್ಯ ಎಂಬ ಭಾರತೀಯ ಸಮಾಜದ ಕ್ರೂರ ಅವಮಾನವೊಂದು ಭೀಮರಾವ್ ರಾಮ್‌ಜಿ ಸಕ್ಪಾಲ್ ಎಂಬಾತನಿಂದ ಭಾರತದ ’ಸಂವಿಧಾನ’ವನ್ನೇ ಬರೆಸಿಬಿಡುತ್ತದೆ. ಸ್ವಾತಂತ್ರ ಪೂರ್ವದ ದಿನಗಳಲ್ಲಿ ಬಿಳೀಯರು ಮಾಡುತ್ತಿದ್ದ ಎಷ್ಟೋ ಅವಮಾನಗಳನ್ನು ತಮ್ಮೊಳಗೆ ಅವಡುಗಚ್ಚಿಕೊಂಡೇ, ಭಗತ್‌ಸಿಂಗ್, ಸುಭಾಷ್‌ಚಂದ್ರ ಭೋಸ್, ವೀರ ಸಾವರ್ಕರ್‍ ರಂತಹವರು ಮಹಾನ್ ಹೋರಾಟಗಾರರಾಗಿ ರೂಪುಗೊಂಡು ಇತಿಹಾಸವಾಗಿದ್ದಾರೆ. ಇಷ್ಟೆಲ್ಲ ಕೆಚ್ಚೆದೆಯ ನಾಯಕರುಗಳು ಹುಟ್ಟಿಕೊಂಡಿದ್ದು ’ಅವಮಾನ’ ಅನ್ನೋ ’ಕಿಡಿ’ ಹೊತ್ತಿದ ನಂತರವೇ ಅಲ್ಲವೇ?
ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡೇ ಜಗತ್ತನ್ನು ನಗಿಸಿದವನು ಚಾರ್ಲಿ ಚಾಪ್ಲಿನ್. ಇನ್ನೂ ಒಂದು ಸೋಜಿಗವೆಂದರೆ ಅವಮಾನಗಳ ನಡುವೆಯೇ ಹುಟ್ಟಿಕೊಂಡವನು ’ಚಾಣಕ್ಯ’!.
ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಹೆತ್ತ ಸಾಧನೆಯ ಪ್ರತೀಕಗಳೇ ಈ ಮೇರು ವ್ಯಕ್ತಿತ್ವಗಳು. ಆದರೆ ನೆನಪಿರಲಿ, ಅಂತಹ ಹೆರಬಲ್ಲಂತಹ ತಾಖತ್ತು ನಿಮ್ಮ ದೇಹಕ್ಕಿರಬೇಕಷ್ಟೆ. ಒಂದು ವೇಳೆ ಆ ತಾಖತ್ತು ನಿಮ್ಮಲ್ಲಿರದೇ ಹೋದಲ್ಲಿ, ಒಂದು ನೆಗ್ಲಿಜಿಬಲ್ ಅನ್ನುವಂತಹ ಸಣ್ಣ ಅವಮಾನ ಕೂಡ ನಿಮ್ಮಲ್ಲಿನ ಅಂತಃಶಕ್ತಿಯನ್ನು ಕೊಂದು ಹಾಕಿ ನಾಮರ್ಧನನ್ನಾಗಿಸಿಬಿಡುತ್ತದೆ.
ಅವಮಾನಗಳು ಬಹಳಷ್ಟು ಪಾಲು ಅನಿರೀಕ್ಷಿತವಾಗಿಯೇ ಆಗೋದು. ನಾಳಿನ ಅವಮಾನವನ್ನು ಎದುರಿಸಲು ಸಜ್ಜಾಗಿದ್ದೇನೆ ಎಂಬ ಮಾನಸಿಕ ಸಿದ್ಧತೆಗೆ ಅದು ಯಾವತ್ತಿಗೂ ಅವಕಾಶ ಮಾಡಿಕೊಡಲಾರದು. ಆದಾಗ್ಯೂ ಅವಮಾನ ಮಾಡುವವರೂ ಕೂಡ ಗೊತ್ತಿಲ್ಲದಂತೆಯೇ, ಅನಿರೀಕ್ಷಿತವಾಗಿ, ಕೆಲವೊಮ್ಮೆ ಅವರ ಗಮನಕ್ಕೆ ಬಾರದಂತೆಯೇ ಮಾಡಿಬಿಡುತ್ತಾರೆ. ಆದರೆ ಆ ಒಂದು ಅವಮಾನ ಇಡೀ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕು ಮತ್ತು ಅಲ್ಲಿಂದಲೇ ನಮ್ಮ ಸಾಧನೆಯೆಂಬ ಗೆಲುವಿನ ಮಹಾ ಜೈತ್ರ ಯಾತ್ರೆ ಪ್ರಾರಂಭಿಸಬೇಕು.
ಒಂದು ವೇಳೆ ಅವಮಾನವನ್ನೇನಾದರೂ ಮರೆತಿರೋ ಅಥವಾ ’ಇದ್ಯಾತರದ್ದು’ ಎಂದು ಕಡೆಗಾಣಿಸಿದಿರೋ, ನೀವು ಲಜ್ಜೆಗೆಟ್ಟವರಾಗಿಬಿಡುತ್ತೀರಿ. ಮತ್ತು ನಿಮಗೆ ಅವಮಾನ ಮಾಡಿದವರನ್ನು ಪರೋಕ್ಷವಾಗಿ ಪುಸಲಾಯಿಸಲು ನೀವೇ ಕಾರಣರಾಗಿಬಿಡುತ್ತೀರಿ. ಆದ ಅವಮಾನವು ನಿಮ್ಮನ್ನು ತುಳಿದು ಹಾಕಿದರಂತೂ ನೀವು ಹೇಡಿಗಳಂತಾಗಿಬಿಡುತ್ತೀರಿ. ಅವಮಾನಕ್ಕಂಜಿ ಅಳುತ್ತ ಕುಳಿತರಂತೂ ಜೀವಮಾನವಿಡೀ ನಿಮ್ಮ ಮನಸು ಅಳುಬುರುಕಿಯಾಗಿಬಿಡುತ್ತದೆ.
ಅವಮಾನವು ಹುಟ್ಟಿಸುವ ಛಲವನ್ನೇ ನೀವು ಗರ್ಭೀಕರಿಸಿಕೊಳ್ಳಬೇಕು, ಆ ಗರ್ಭದಿಂದ ಸಾಧನೆಯ ಮಗು ಹೆರಬೇಕು, ಆ ತಾಕತ್ತು ನಿಮ್ಮಲ್ಲಿದೆಯೆಂಬುದನ್ನು ಈ ಜಗತ್ತಿಗೆ ನೀವು ತೋರಿಸಿಕೊಡಬೇಕು ಮತ್ತು ಆ ಮೂಲಕ ಅವಮಾನಿಸಿದವರಿಗೆ ಮುಖಭಂಗ ಮಾಡಿಬಿಡಬೇಕು. ಖಂಡಿತವಾಗ್ಯೂ ಅಂತಹದ್ದೊಂದು ಸಾಧ್ಯತೆ ನಿಮ್ಮಲ್ಲಿನ ಛಲಕ್ಕೆ ಇದ್ದೇ ಇರುತ್ತದೆ. ಹಾಗೆಯೇ ಅದನ್ನು ಹುಟ್ಟಿಸುವ ಅವಮಾನಕ್ಕೂ ಕೂಡ. ಮುಂದೆಂದಾದರೂ ಅವಮಾನವಾಯಿತೆಂದರೆ, ಮುಸುಮುಸು ಅಳದೆ, ಛಲತೊಟ್ಟು ಗೆಲುವಿನೆಡೆಗೆ ಜೈತ್ರಯಾತ್ರೆ ಪ್ರಾರಂಭಿಸಿ.
ಪ್ರೇಮ್....

Sunday, December 23, 2007

ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...


ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು,
ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು,
ಮಾಗಿ ಮುಗ್ತು, ಬೇಸ್ಗೆ ನುಗ್ತು,
ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ....
ನಂಗು-ನಿಂಗು ಎಂಗಾಗೋಯ್ತು ನಂಜು...

ನನ್ನ ಇಷ್ಟದ ಕವಿ "ರತ್ನ"ನ ಈ ಪದ ನನ್ನ ಬದುಕಿಗೆ, ನನ್ನ ಪ್ರೀತಿಗೆ ಪೂರಕವೇನೋ ಅನಿಸುತ್ತಿದೆ. ನಂಜು ಅನ್ನೋಳು ಅವರ ಹೆಂಡತಿ, ಹಟ್ಟಿ ಅನ್ನೋದು ಅವರ ಮನೆ ಮತ್ತು ಅದರ ಸುತ್ತಲಿನ ಪರಿಸರ, ಮಾಗಿ ಅನ್ನೋದು ಛಳಿಗಾಲ. ಅವರ ಹೆಂಡತಿ ನಂಜಿ ಅನ್ನೋಳು ಛಳಿಗಾಲದಲ್ಲಿ ಹಸಿರ ಹುಲ್ಲ ಮೇಲೆ ಫಳಫಳನೆ ಹೊಳೆಯುತ್ತ ಮಲಗಿಕೊಳ್ಳುವ ಮಂಜಿನಂತೆ, ಅವಳು ಇಲ್ಲವಾದ ಕ್ಷಣ ಅಂದ್ರೆ ಛಳಿಗಾಲ ಕಳೆದು ಹೋದದ್ದು. ಬೇಸಿಗೆ ನುಗ್ಗಿ ಅವರ ನಂಜಿ ಅನ್ನೋ ಛಳಿಯನ್ನು ಹೊತ್ತೊಯ್ದದ್ದು. ಇದು ನಾನು ಆ ಕವಿತೆಯ ಬಗ್ಗೆ ಅರ್ಥ ಮಾಡ್ಕೊಂಡಿದ್ದು. ಬಹುಶಃ ಈ ಕವಿತೆಯಲ್ಲಿನ ಒಂದೊಂದು ಪದಗಳು, ನನಗೂ ಮತ್ತು ನನ್ನ ಪ್ರೀತಿಗೂ ಸೂಕ್ತ ಅನ್ವಯಿಕೆಯಾಗಿದೆ.
ಈ ಲೇಖನದ ಶೀರ್ಷಿಕೆ ಬರೆಯುತ್ತಿದ್ದಂತೆಯೇ ಹೃದಯದ ಬಡಿತಗಳಲ್ಲಿ ಏನೋ ಕಲರವ, ಬಡಿತಗಳ ವೇಗ ಅಳೆಯಲು ಸಾಧ್ಯವಾಗುತ್ತಿಲ್ಲ ಒಂದೇ ಸವನೆ ಆವೇಗ, ಉದ್ವೇಗ. ಅಕ್ಷರಗಳು ಬೆರಳಚ್ಚಿಸುವಲ್ಲಿ ಏಕೋ ಏನೋ ಅಡೆತಡೆ. ಕಣ್ಣೊಳಗೆ ಕಂಬನಿಯ ಧಾರೆ ಧಾರೆ. ಎವರೆಸ್ಟ್ ಪರ್ವತವೇ ದೇಹದ ಮೇಲೆ ಇಟ್ಟಿರುವಷ್ಟು ಹೃದಯ ಭಾರವಾಗಿದೆ. ಒಂದು ವರ್ಷದೊಳಗಡೆಯೇ ಒಂದು ಜನುಮಕ್ಕಾಗುವಷ್ಟು ಪ್ರೀತಿಸಿದ್ದನ್ನು ಹೀಗೆ ಒಂದೇ ಲೇಖನದೊಳಗೆ ಬರೆದು ಅವಳಿಗೆ ಮತ್ತು ಅವಳ ಪ್ರೀತಿಗೆ "ವಿದಾಯ" ಹೇಳುತ್ತಿರುವ ನನ್ನ ವೇದನೆ, ನೋವು, ಸಂಕಟ, ತಳಮಳ ಬಹುಶಃ ಅವಳಿಗಲ್ಲದೆ ಬೇರೆ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಯಾಕೆಂದರೆ ಅವಳು ನನ್ನ ದೇವತೆ, ನನ್ನ ಜೀವ. ನನ್ನ ಹೃದಯ. ನನ್ನ ಚೈತನ್ಯ. ಈ ಕ್ಷಣದಿಂದ ನಾನು ಜಿವ, ಹೃದಯ, ಚೈತನ್ಯ ಈ ಮೂರನ್ನೂ ಕಳೆದುಕೊಳ್ಳುತ್ತಿದ್ದೇನೆ ಅಂದಾದ ಮೇಲೆ ನನಗುಳಿಯೋದು ಬರೀ ’ದೇಹ’ ಮಾತ್ರ, ಅದು ಜೀವವಿಲ್ಲದ್ದು!. ಎಂದಿಗಿಂತಲೂ ತುಂಬ ಭಯ, ಭಕ್ತಿ, ಶೃದ್ಧೆಯಿಂದ ಇವತ್ತು ನಾನು ದೇವರ ಮುಂದೆ ದೀಪ ಹಚ್ಚಿ ದೇವರಲ್ಲಿ ಕೇಳಿದ್ದು ಒಂದೇ ಒಂದು "ಅವಳಿಗೆ ಸುಖ ಸಿಗಲಿ, ನನಗೆ ಸಾವು ಬರಲಿ".ಇಷ್ಟಕ್ಕೂ ನಮ್ಮ ಪ್ರೀತಿ ಹೀಗೆ ವಿದಾಯ ಕಂಡುಕೊಳ್ಳಲು ಕಾರಣವಾದರೂ ಏನೆಂದು ಹೇಳದೇ ಇರಲಾರೆ. ನನ್ನ ಮತ್ತು ಅವಳ ಪ್ರೀತಿಯ ಮಧ್ಯೆ ವಿದಾಯದ ಪೂರ್ಣವಿರಾಮ ಕಾಣಿಸಿಕೊಳ್ಳಲು "ಜಾತಿ"ಯೊಂದೇ ಕಾರಣ. ಬಹುಶಃ ಭಾರತದಂತಹ ದೇಶದಲ್ಲಿ ಎಷ್ಟೋ ಸಂಖ್ಯೆಯ ಪ್ರೇಮಿಗಳು ಮತ್ತು ಅವರ ಪ್ರೇಮಗಳು ಅಮರವಾಗಲು ಜಾತಿಯೇ ಮುಖ್ಯ ಕಾರಣ. I hate caste and castism. ಸ್ವತಂತ್ರ ಸಿಕ್ಕ ಅರವತ್ತು ವರ್ಷಗಳವರೆಗೆ ಜಾತಿ ಮತ್ತು ಅದರ ಪದ್ಧತಿಗಳು ಇನ್ನೂ ಜೀವಂತವಾಗಿರೋದಕ್ಕೆ ಕಾರಣಗಳು ಹುಡುಕಿಕೊಳ್ಳದೇ ಇದ್ದರೆ ಬಹುಶಃ ಯುವ ಪೀಳಿಗೆಗೆ ಜಾತಿ ಅನ್ನೋದು ಭಯಂಕರ ಸಮಸ್ಯೆಯಾಗೋದರಲ್ಲಿ ಸಂದೇಹವೇ ಇಲ್ಲ. Sorry... ನಾನು ಮುಖ್ಯವಾಗಿ ಹೇಳೋಕೆ ಹೊರಟಿರೋ ವಿಷಯವೇ ಬೇರೆಯಾದ್ದರಿಂದ, ವಿಷಯಾಂತರಕ್ಕೆ ಅವಕಾಶ ಕೊಡದೆ ಜಾತಿಯ ಚರ್ಚೆಯನ್ನು ಪೂರ್ಣಗೊಳಿಸಿಬಿಡುತ್ತೇನೆ.ಅವಳಿಗೆ ಈಗ ಮದುವೆ ನಿಶ್ಚಯವಾಗುತ್ತಿದೆ... ನನ್ನ ಎದೆಯೊಳಗೆ ವಿಷ ಕಲೆಸಿದಂತಾಗುತ್ತಿದೆ. ಸುಮ್ಮನೆ ಎಲ್ಲ ಪ್ರೇಮಿಗಳಂತೆ ಪ್ರೀತಿಸಿರಲಿಲ್ಲ ನಾವು. ತಾಳಿ ಕಟ್ಟದೆಯೇ ಮದುವೆಯಾಗಿದ್ದೆವು. ದೇಹಗಳ ಬೆಸುಗೆ ಇಲ್ಲದೇನೇ ಮಕ್ಕಳು ಹೆತ್ತಿದ್ದೆವು. ಒಂದಷ್ಟು ಸಿಹಿ ಮುತ್ತುಗಳು, ಮತ್ತೊಂದಷ್ಟು ಅಪ್ಪುಗೆಯ ಹೊರತಾಗಿ ನಾವು ಏನನ್ನೂ ಪಡೆದುಕೊಳ್ಳಲಿಲ್ಲ. ನಮ್ಮಿಬ್ಬರಲ್ಲಿದ್ದುದು ಬರೀ ಶುದ್ಧ ಮತ್ತು ಆರೋಗ್ಯಕರ ಪ್ರೀತಿ ಮಾತ್ರ!. ’ನನ್ನ ಬದುಕಿಗೆ ನೀನಿಲ್ಲದೇ ಇದ್ದರೆ, ನನ್ನ ಬಾಳು ಪೂರ್ಣವಾಗುವುದಿಲ್ಲ ಕಣೋ ಪೆದ್ದ’ ಅನ್ನುತ್ತಿದ್ದವಳು, ಇನ್ನೊಬ್ಬನ ಬಾಳಿಗೆ ಬೆಳಕಾಗಲು ಹೊರಟಿದ್ದಾಳೆ. ಯಾಕೆ ಅಂದ್ರೆ ನನ್ನ ಬಾಳು ಪೂರ್ಣವಾಗಲಿಲ್ಲವಲ್ಲೋ... ಅಂತ ಕಣ್ಣೀರಾಗಿ ಉತ್ತರವಲ್ಲದ ಉತ್ತರ ಕೊಟ್ಟಿದ್ದಾಳೆ. ಯಾವತ್ತಿದ್ದರೂ ನನಗೆ ಮತ್ತು ನನ್ನ ಮನಸಿಗೆ ನೀನೇ ಗಂಡ, ಯಾಕಂದ್ರೆ ನಾವಿಬ್ಬರೂ ದೇವರು ಮೆಚ್ಚಿದ ’ಗಂಡ-ಹೆಂಡತಿ’ ಅಂದಿದ್ದಾಳೆ. ನಮ್ಮ ಪ್ರೇಮ, ಪ್ರೀತಿ ಮತ್ತು ಅದರ ಆಳ ದೇವರಿಗೆ ಮಾತ್ರವೇ ಗೊತ್ತಲ್ಲ? ಅನ್ನುತ್ತಿದ್ದವಳ ಮಾತು ಕೇಳುತ್ತಿದ್ದರೆ ಉಬ್ಬಿದ ನನ್ನ ಕೊರಳೊಳಗೆ ಧ್ವನಿಯೇ ಹೊರಟು ಬರಲಿಲ್ಲ. ಈ ಜನುಮ ಪೂರ್ತಿ ನನ್ನೆದೆಯೊಳಗೆ ಹುಟ್ಟಿಕೊಳ್ಳುವ ’ಪ್ರೀತಿ’ ಬರೀ ನಿಂಗಾಗಿ ಮಾತ್ರ. ಅದೆಲ್ಲವನ್ನೂ ಅಳೆದೂ, ಸುರಿದೂ ನಿನಗೇ ಕೊಡುತ್ತೇನೆ. ದಯವಿಟ್ಟು ನೀನು ಬೇರೆ ಹುಡುಗಿಯನ್ನು ಮದ್ವೆ ಮಾಡ್ಕೊಳ್ಳೋ... ಅಂತ ಗೋಗರೆದಿದ್ದಾಳೆ. ಪ್ರೀತಿ ಫಲಿಸದ ನಂತರ ಹುಡುಗಿಯರು ಹೇಳುವ ಮಾತೇ ಇದು, ಅಲ್ಲವೇ?’ತೊರೆದು ಹೋಗದಿರು ಜೋಗಿ, ಅಡಿಗೆರಗಿದ ಈ ದೀನಳ ಮರೆತು, ಸಾಗುವೆ ಏಕೆ ವಿರಾಗಿ..." ಅನ್ನೋ ಭಾವಗೀತೆಯ ಕನವರಿಕೆ ಈಗ ಅವಳೆದೆಯಲ್ಲಿದೆ. ಅವಳಿಗಾದರೂ ನಾನ್ಯಾಕೆ ಮೋಸ ಮಾಡಬೇಕು ಅನ್ನೋದು ಸಧ್ಯದ ನನ್ನ ತರ್ಕ. ಅವಳ ಅನಿವಾರ್ಯ, ಅವಳ ಮೇಲಿನ ಒತ್ತಡಗಳನ್ನು ಬಲ್ಲವ ನಾನು. ಅದಕ್ಕೆಂದೇ ಭಾರವಾದ ಹೃದಯದೊಂದಿಗೆ ಅವಳಿಷ್ಟದ ಅನಿವಾರ್ಯದ ಬದುಕಿಗೆ ಗುಡ್‌ಲಕ್‌ ಹೇಳುತ್ತ, ನನ್ನ ಪ್ರೇಮಕ್ಕೆ ವಿದಾಯ ಹೇಳುತ್ತಿದ್ದೇನೆ. ನಾವಿಬ್ಬರೂ ಸನಿಹವಿಲ್ಲದಿದ್ದರೂ ಒಬ್ಬರ ಮನಸನೊಬ್ಬರು ಜನುಮಪೂರ್ತಿ ತಲುಪುವೆವು ಅನ್ನೋದಂತೂ ಸತ್ಯ. ಅದನ್ನು ಯಾರಿಂದಲೂ ತಪ್ಪಿಸಲಾಗಲ್ಲ. ನಮ್ಮಿಬ್ಬರ ಪ್ರೀತಿಯೇ ಅಂತಹುದು. ಸಪ್ತ ಸಾಗರದಾಚೆಗಿನ ತೀರಗಳಲ್ಲಿದ್ದರೂ ನಾವು ನಮ್ಮ ಪ್ರೀತಿಯನ್ನು ವಿನಿಮಯಿಸಿಕೊಳ್ಳಬಲ್ಲೆವು. ಅಂತಹುದೊಂದು ಕಲೆ ನಮ್ಮಿಬ್ಬರಿಗೆ ಮಾತ್ರ ಸಿದ್ಧಿಸಿದೆ ಅಂದುಕೊಳ್ಳುತ್ತೇನೆ. ಈ ಲೇಖನದ ಮುಖಾಂತರ ಅವಳಿಗೊಂದು ಮಾತು ಹೇಳಲು ಇಷ್ಟಪಡುತ್ತೇನೆ. ಹುಡುಗೀ.... ನೀನೆಲ್ಲೇ ಇರು, ಯಾವ ಸ್ಥಿತಿಯಲ್ಲೇ ಇರು ನಾನು ನಿನ್ನ ಪಕ್ಕಕ್ಕೆ, ನಿನ್ನ ನೆರಳಿನ ಛಾಯೆಯಾಗಿ ನಾನಿರುತ್ತೇನೆ. ಎಷ್ಟೇ ಆದ್ರೂ ನೀನು ನನ್ನ ’ಮಾನಸ ಪತ್ನಿ’ ಅಲ್ಲವೇ? ಮರೆತುಬಿಡು ಅನ್ನೋದು ಮರೆತಿದ್ದೇನೆ ಅನ್ನೋದು ಯಾವತ್ತಿಗೂ ನಮ್ಮಿಬ್ಬರ ಮಧ್ಯೆ ಸುಳಿಯೋದು ಬೇಡ. ಯಾಕೆಂದ್ರೆ, ಪ್ರೇಮಿಗಳು ಒಬ್ಬರನ್ನೊಬ್ಬರು ಮರೆಯೋದು ಇಬ್ಬರೂ ಸತ್ತ ನಂತರವೇ...!. ಸಧ್ಯಕ್ಕೆ ಪ್ರೀತಿಗೆ ಒಂದದಷ್ಟು ದಿನಗಳವರೆಗೆ ಅಥವ ನಮ್ಮ ಮನಸು ಒಂದು ಹಿಡಿತಕ್ಕೆ ಬರುವವರೆಗೆ ವಿದಾಯ ಹೇಳಿಕೊಳ್ಳೋಣ.ಮತ್ತೆ ಬರೆಯುತ್ತೇನೆ....
ಪ್ರೇಮ್...

Wednesday, December 12, 2007

ವೀಕೆಂಡ್ ಪಾರ್ಟಿಗಳೂ, ಬೆಳದಿಂಗಳೂಟವೂ....

ಸಾಫ್ಟ್‌ವೇರ್‍ ಪ್ರಪಂಚದಲ್ಲಿ ವೀಕೆಂಡ್ ಪಾರ್ಟಿಗಳಿಗೆ ತುಂಬ ಮಹತ್ವವಿದೆ ಅನ್ನೋದನ್ನು ಅಲ್ಲಗಳೆಯಲಾಗದು. ಅವರವರ ಭಾವಕ್ಕೆ ಅವರವರ ಟೇಸ್ಟಿಗೆ ತಕ್ಕಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗೆಳೆಯರೊಂದಿಗೆ (ಕೆಲವರು ತಂತಮ್ಮ ಗರ್ಲ್‌ ಫ್ರೆಂಡ್‌ಗಳೊಂದಿಗೆ) ಹೊರಟುಬಿಡುವುದು "ವೀಕ್"ನ ಉದ್ದೇಶ. ಸಾಫ್ಟ್‌ವೇರ್‍ ಪ್ರಪಂಚದಲ್ಲಿನ ಎಲ್ಲ ಗೆಳೆಯರ ಪೈಕಿ ಹೆಚ್ಚಿನ ಭಾಗದಷ್ಟು ಗೆಳೆಯರು ‘ಸೋಮರಸ’ದಾಸರೇ. ಹೀಗಾಗಿ ‘ಸೋಮರಸದಾಸರ’ ಗೆಳೆತನದೊಳಗೆ ದಾಸರಲ್ಲದವರ ಪಡಿಪಾಟಲು ಹೇಳತೀರದು. ಕೆಲವರು ತಮ್ಮ ಲಿಮಿಟ್ಟಿಗಿಂತ ಜಾಸ್ತಿಯೇ ದಾಸರಾಗಿಬಿಟ್ಟರಂತೂ ಅವರನ್ನು ಅಲ್ಲಿಂದ ಕರೆತರುವವರು ನಿಜವಾಗಿಯೂ ಪಾಪಿ(?)ಗಳು. ಪಬ್ಬು, ಕ್ಲಬ್ಬು, ರೆಸ್ಟೂರಾಂಟು, ರೆಸಾರ್ಟುಗಳಲ್ಲಿ ರಾತ್ರಿಯ ಕಳೆಯೇ ಒಂಥರಾ ಇರುತ್ತೆ. ಆರ್ಟಿಫಿಷಿಯಲ್ ಗಾರ್ಡನ್, ಹೂದೋಟ, ಒಣಗಿದ ಗಿಡಗಳೊಳಗೆ ಸೀರಿಯಲ್ ಲೈಟ್ ಬಿಟ್ಟು ಸೃಷ್ಟಿಸುವ ಹೂಗಿಡಗಳ ನಡುವೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ನೆಪಕ್ಕಾದರೂ ಇರುವಂತಹ ಹುಲ್ಲಿನ ಹಾಸಿಗೆ, ಅದರ ಮಧ್ಯದೊಳಗೊಂದು ನೀರ ಕಾರಂಜಿ. ಇಷ್ಟಕ್ಕೇ ಉನ್ಮತ್ತರಾಗಿ, ಮದೋನ್ಮತ್ತರಾಗಿ ವಾಹ್! ಅನ್ನುವಂತಹ ಉದ್ಗಾರವೆಸೆದು ಮನತಣಿಸಿಕೊಳ್ಳುವವರ ನಡುವೆ, ನಮ್ಮ ಸೃಷ್ಟಿಯ ರಮ್ಯತೆಯ ನಡುವೆ, ಅದರ ಸೊಬಗನ್ನು ಸವಿಯುವ ನಮ್ಮಂಥವರು ನಿಜಕ್ಕೂ ಗ್ರೇಟ್ ಅಲ್ವಾ?
ನಮ್ಮ ಊರ ಪಕ್ಕದ ಹಳ್ಳದಲ್ಲಿ ಹರಿದಾಡುವ ನೀರ ನಡುವೆ ಕಾಲಿಳಿಬಿಟ್ಟು ರೋಮಾಂಚಿತರಾಗುವ, ನಾಲ್ಕಾರು ಹೆಜ್ಜೆ ದಾಟಿದರೆ ಸಿಗುವ ಗುಡ್ಡಗಳ ನಡುವೆ, ಬಗೆ ಬಗೆಯ ಗಿಡಗಳ ನಡುವೆ ತೂಗು ಮಂಚ ಕಟ್ಟಿ ತುಯ್‌ದಾಡುವ, ಆಯಾಸವಾದರೆ ಹಸಿರ ಹುಲ್ಲಿನ ಮೇಲೆ ಸುರುಳಿಯಂತೆ ಸುತ್ತಿಕೊಳ್ಳುತ್ತಾ ಆಹ್ಲಾದತೆಯನ್ನು ಪಡೆದುಕೊಳ್ಳುವ ನಮ್ಮ ಗೆಳೆಯರ ಬಳಗಕ್ಕೆ ನಿಜಕ್ಕೂ ಹೆಮ್ಮೆ. ನಾವು ಗೆಳೆಯರೆಲ್ಲರೂ ಸೇರಿ, ಹುಣ್ಣಿಮೆಯ ದಿನಗಳಲ್ಲಿ ರಾತ್ರಿ ಚಂದ್ರನ ಬೆಳಕಿನಲಿ, "ಬೆಳದಿಂಗಳೂಟ" ಮಾಡುತ್ತೇವಲ್ಲ, ನಿಜಕ್ಕೂ ಅದು ಅಮೃತಕ್ಕೆ ಸಮಾನ. ಎಲ್ಲರೂ ತಮ್ಮ ತಮ್ಮ ಮನೆಯಿಂದ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಿಕೊಂಡು ಚಕ್ಕಡಿ ಹತ್ತಿ ಹೊರಡುತ್ತಿದ್ದರೆ ಅದು ನಿಜಕ್ಕೂ ‘ಮದುವೆ ದಿಬ್ಬಣ’ ಹೊರಟಂತಹ ಸಂಭ್ರಮ. ಎತ್ತಿನ ಕೊರಳ ಗಂಟೆಯ ನಾದ, ರಸ್ತೆಯ ಪಕ್ಕಕ್ಕೆ ‘ಕಿರ್‍’ ಎನ್ನುವ ಶಬ್ದದ ಮೋಜು, ನಡು ನಡುವೆ ನನ್ನ ಸ್ನೇಹಿತನೊಬ್ಬ ಹಾಡಿಕೊಳ್ಳುವ ಮೈಸೂರು ಮಲ್ಲಿಗೆಯ ಹಾಡು... ಅಬ್ಭಾ... !
ಎಲ್ಲರೂ ಸೇರಿಕೊಂಡು ತೋಟದ ನಡುವೆ ಗುಡಾರ ಹಾಸಿಕೊಂಡು, ಮೊದಲಿನ ಕೆಲ ನಿಮಿಷಗಳವರೆಗೆ ಜೋಕ್ಸು, ಡ್ಯಾನ್ಸೂ, ಆಕ್ಟಿಂಗೂ, ಮಿಮಿಕ್ರಿ, ನಾಟಕದ ಡೈಲಾಗ್‌ಗಳು, ಹಾಡುಗಳು ಹೇಳಿಕೊಳ್ಳುತ್ತಿದ್ದರೆ ಹಸಿವು ಗಾಯಬ್! ಅಷ್ಟರ ನಡುವೆ ಊಟೇಶ್ವರನೊಬ್ಬ ಊಟದ ನೆನಪು ಮಾಡುತ್ತಿದ್ದಂತೆ ಎಲ್ಲರೂ ‘ಹುರ್ರೋ.....’ ಅಂತ ಊಟಕ್ಕೆ ರೆಡಿ. ತಮ್ಮ ತಮ್ಮ ಬುತ್ತಿ (ಊಟದ ಡಬ್ಬಿ) ಬಿಚ್ಚಿ, ಎಲ್ಲರೂ ಒಂದೆಡೆ ಒಟ್ಟಾಗಿಸಿ, ಅದರಲ್ಲೊಬ್ಬ ಎಲ್ಲರ ತಟ್ಟೆಗೆ ಬಡಿಸುತ್ತಿದ್ದಂತೆಯೇ "ಓಂ ಅಸತೋಮಾ ಸದ್ಗಮಯ,, ತಮಸೋಮಾ ಜೋತಿರ್ಗಮಯ,," ಅನ್ನುವ ಮಂತ್ರ ಪಠಿಸಿದ ಮೇಲೆಯೇ ತುತ್ತು ಬಾಯಿಗಿಡೋದು ಮತ್ತು ಅಂತಹುದೊಂದು ಮಂತ್ರ ಪಠಿಸಿದರೇನೇ ನಮಗೆ ಊಟ ಸೇರೋದು. ಆದರೆ ಸಾಫ್ಟ್‌ವೇರ್‍ ಜನಕ್ಕೆ ಮೈಕೆಲ್ ಜಾಕ್ಸನ್‌ನ ಹುಚ್ಚು ಕುಣಿತದ ಸಂಗೀತವಿದ್ದರೇನೇ, ಕರ್ಕಶ ಹಾಡುಗಳಿದ್ದರೇನೇ ಅವರ ಮನಸು ಶಾಂತ ಶಾಂತ... ಮತ್ತು ಅಂತಹ ಪಾರ್ಟಿಗಳಲ್ಲಿ ‘ಡಿಸ್ಕೋ’ ಸಂಗೀತವಿದ್ದರೇನೇ ಅವರಿಗೆ ಗುಂಡು-ತುಂಡು ಸೇರೋದು. ಎಂತಹ ವ್ಯತ್ಯಾಸ ನೋಡಿ! ಎಲ್ಲಿಯ ಜಾಕ್ಸನ್ ಹಾಡು, ಎಲ್ಲಿಯ ಅಸತೋಮಾ ಸದ್ಗಮಯ.... !
ಸಾಫ್ಟ್‌ವೇರ್‌ನ ಸಾಫ್ಟ್ ಗೆಳೆಯರೆ, ನಿಜವಾಗಿಯೂ ಸೃಷ್ಟಿಯ ಮಧ್ಯೆ ನಿಂತುಕೊಂಡು ರಮ್ಯತೆಯ ಸೊಬಗನ್ನು ಸವಿಯುವ ಕನಸಾದರೂ ಕಾಣುತ್ತೀರಾ? ನಿಮಗೆ ಬೃಹತ್ ನಗರಗಳಲ್ಲಿ ಅಂತಹ ಸೊಬಗನ್ನು ಸವಿಯೋದಕ್ಕೆ ಸಮಯದ ಕೊರತೆ ಮತ್ತು ಕೊರೆತ ಇರುವುದು ಸಹಜವಾದರೂ ವೀಕೆಂಡ್‌ನ ಎರಡು ದಿನಗಳಾದರೂ ನಿಮಗೆ ಸಿಗುತ್ತಲ್ಲಾ, ಆ ಎರಡು ದಿನಗಳನ್ನು ನೀವು ಸೃಷ್ಟಿಯ ನೈಜ ಸೊಬಗಿನೊಂದಿಗಿದ್ದರೆ ನಿಮ್ಮ ಗೊಂದಲದ ಮನಸಿಗೊಂದಷ್ಟು ಶಾಂತತೆಯ, ಆಹ್ಲಾದತೆಯ ಸಿಂಚನವಾಗಬಹುದಲ್ವಾ? ಬದುಕಿಯೂ ಸತ್ತಂತಿರುವುದೆಂದರೆ ಅದು ಗೋರಿಯೊಳಗಿನ ಹೆಣ ಉಸಿರಾಡಿದಂತೆ ಅಲ್ಲವೆ? ಗೋರಿಯಂತಹ ಸ್ಥಳವೆಂದರೆ ಅದು ಸಾಫ್ಟ್‌ವೇರ್‍ ಅನ್ನೋ ಕಂಪನಿಯ ಗೂಡೇ ಅಲ್ಲವಾ? ದಯವಿಟ್ಟು ಅದರೊಳಗಿಂದ ಎದ್ದು ಬನ್ನಿ ನನ್ನೂರಿನ ತೋಟದರಮನೆಗೊಮ್ಮೆ ಪಯಣ ಬೆಳೆಸಿ, ಮನಸು ಪ್ರಫುಲ್ಲವಾಗಿಸಿಕೊಳ್ಳಿ. ಮತ್ತು ಸತ್ತರೂ ಬದುಕಿದಂತಿರಿ ನನ್ನ ನೆನಪಿನೊಳಗೆ....
ಪ್ರೇಮ್...

Tuesday, December 11, 2007

ಇದೋ .... ನಾನು "ಬ್ಲಾಗ್‌" ಬಾಗಿಲಿಗೆ ಬಂದೇ ಬಿಟ್ಟೆ.....!

ನಾನು ಬ್ಲಾಗ್ ಬರಹಕ್ಕೆ ಹೊಸಬ,,, ಇದೀಗ ಅಂಬೇಗಾಲಿಕ್ಕುತ್ತಿದ್ದೇನೆ,,, ಮುಂದಿನ ಹೆಜ್ಜೆಗಳನ್ನಿಡಲು ತಮ್ಮ ಪ್ರೀತ್ಯಾದರವನ್ನೂ ಕೋರುತ್ತಿದ್ದೇನೆ. ದಯವಿಟ್ಟು ಎಲ್ಲಿ ತಪ್ಪುತ್ತೇನೋ ಅಲ್ಲಿ ಬೆನ್ನ ಮೇಲೆ ಗುದ್ದಿ ಎಚ್ಚರಿಸಿ, ಎಲ್ಲಿ ಒಪ್ಪುತ್ತೇನೋ ಅಲ್ಲಿ ಬೆನ್ನು ಚಪ್ಪರಿಸಿ. ಇದರ ಹೊರತಾಗಿ ಮತ್ತೇನನ್ನೂ ನಿಮ್ಮಿಂದ ಬಯಸುವುದಿಲ್ಲ... ನನ್ನ-ನಿಮ್ಮ ಸ್ನೇಹಕ್ಕೆ ಧಕ್ಕೆ ಬರದಂತೆ ನೋಡಿಕೊಂಡು ಹೋಗುವುದು ನನ್ನ ಧರ್ಮ, ಜವಾಬ್ದಾರಿ. ಅದನ್ನ ನಾನು ಕಾಯ್ದುಕೊಳ್ಳುತ್ತೇನೆ ಕೂಡ.
ನನ್ನದೊಂದು ಪುಟ್ಟ ಪರಿಚಯ:
ಶಿವಶರಣ ಎಸ್. ಗೌರ ಅನ್ನೋದು ನನ್ನ ಪೂರ್ತಿ ಹೆಸರು, ಕೆಲವರು ನನ್ನ ಜನ್ಮ ಹೆಸರು ಪ್ರೇಮ್ ಅಂತಾನೂ ಕೂಗ್ತಾರೆ, ಅದು ಕೆಲವರಿಗಷ್ಟೇ ಗೊತ್ತು...ಈಗ ನಿಮಗೂ ಕೂಡ! ನಾನೀಗ ಸರಕಾರಿ ಮಹಿಳಾ ಪಾಲಿಟೆಕ್ನಿಕ್‌, ಗುಲಬರ್ಗಾದಲ್ಲಿ ಬೆರಳಚ್ಚುಗಾರ (ಟೈಪಿಸ್ಟ್) ಅಂತ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಲೇಖನಗಳನ್ನು ಬೆರಳಚ್ಚಿಸುವುದು ತುಸು ಸುಲಭ... ಹುಟ್ಟಿದ್ದು ಮೇ-೧೧ ರಂದು,,, (ಆ ದಿನವನ್ನು ಬುದ್ಧ ನಕ್ಕಾಗ...! ಅಂತ ಕರೆದದ್ದು ನೆನಪಿದೆ ಅಲ್ವಾ?) ಮದುವೆ ಇನ್ನೂ ಆಗಿಲ್ಲ... ಸಧ್ಯಕ್ಕೆ ಸೀರಿಯಸ್ಸಾಗಿ ಕನ್ಯಾನ್ವೇಷಣೆ ಮಾಡ್ಲೇಬೇಕು ಅಂತ ನನ್ನ ಹಿತೈಷಿಗಳೆಲ್ಲರೂ ಹೇಳುತ್ತಿದ್ದಾರೆ... ನನ್ನ ಮನಸೂ ಕೂಡ ಆ ಕಡೆ ಹೋಗುತ್ತಿದೆ.... ಇದರಲ್ಲೂ ಕೂಡ ತಮ್ಮ ಸಹಕಾರ ಅಗತ್ಯ... ಪ್ಲೀಸ್....!
ಓದು ಕಡಿಮೆ,,,ಹೀಗಾಗಿ ಅದನ್ನು ಹೇಳೋದು ಬೇಡ. ಬರೆಯಬೇಕೆಂಬ ಹಂಬಲ, ಹಸಿವು ಮಾತ್ರ ದೊಡ್ಡದು ಅದಕ್ಕೆಂದೇ ಈ ದಾರಿ ಕಂಡುಕೊಂಡಿದ್ದೇನೆ. ಅಂದ ಹಾಗೆ ಈ ದಾರಿಯನ್ನು ಹುಡುಕಿ ಕೊಟ್ಟೋನು ನನ್ನ ಅಣ್ಣನ ಮಗ, ಸಾಫ್ಟ್‌ವೇರ್‍ ಇಂಜಿನಿಯರ್‍ ಮಾಸ್ಟರ್‍ ಮಂಜುನಾಥ್.... ವಿಚಾರಕ್ಕೆ ಕೂತರೆ ನಮ್ಮಿಬ್ಬರಿಗೂ ಆರೋಗ್ಯಕರ ಜಗಳ ಆಗುತ್ತಲೇ ಇರುತ್ತೆ. ಅದನ್ನವನು ತನ್ನ ಲೇಖನದಲ್ಲಿ ಬರೆದೂ ಇದ್ದಾನೆ.
ಗೆಳೆಯ/ಗೆಳತಿ/ಬಂಧು/ಬಾಂಧವರೆ.... ನನ್ನ ಮನಸಿನ ಖಾಲಿ ಪುಟಗಳಲ್ಲಿ ಕೆಲವು ಅಕ್ಷರಗಳನ್ನು ಮೂಡಿಸಿ ನಿಮ್ಮೆದುರು ಇಡೋಕೆ ಬಯಸಿದ್ದೇನೆ.... ತಪ್ಪೋ ಒಪ್ಪೋ ಎಲ್ಲವನ್ನೂ ನನಗೆ ತಿಳಿಸುವ ಮೂಲಕ ನನ್ನ ಬರಹಗಳನ್ನು ಸ್ವೀಕರಿಸುತ್ತೀರೆಂಬ ಭರವಸೆ ಇಟ್ಟುಕೊಂಡಿರುವ...
ನಿಮ್ಮ....
ಪ್ರೇಮ್ ಎಸ್. ಗೌರ್‍.